ನಸರತ್ ಶಾಹ -
ಈ ಹೆಸರಿನ ಸುಲ್ತಾನರು ಇಬ್ಬರು. 1518ರಿಂದ 1533ರವರೆಗೆ ಬಂಗಾಲವನ್ನಾಳಿದ ನಸರತ್ ಶಾಹ, ಹುಸೇನ್ ಶಾಹನ ಹಿರಿಯ ಮಗ. ಪಟ್ಟಕ್ಕೆ ಬಂದಮೇಲೆ ಈತ ನಸೀರ್-ಉದ್-ದೀನ್ ನಸರತ್ ಶಾಹ ಎಂಬ ಬಿರುದನ್ನು ಧರಿಸಿ, ತನ್ನ 18 ಮಂದಿ ಸಹೋದರರನ್ನು ಇವನು ಚೆನ್ನಾಗಿ ನೋಡಿಕೊಂಡ. ತನ್ನ ತಂದೆಯ ಹಾಗೆಯೇ ಇವನು ಯಶಸ್ವಿಯಾಗಿ ಆಳ್ವಿಕೆ ನಡೆಸಿದ. ತಿರ್‍ಹುತ್ತನ್ನು ಗೆದ್ದು ಅಲ್ಲಿ ತನ್ನ ಸಂಬಂಧಿಯನ್ನು ರಾಜ್ಯಪಾಲನಾಗಿ ನೇಮಿಸಿದ. ಮೊಗಲರ ವಿರುದ್ಧ ಸಂಯುಕ್ತ ಸಂಘಟಿತ ಹೋರಾಟ ನಡೆಸಲು ಈತ ನಡೆಸಿದ ಯತ್ನ ವಿಫಲವಾಯಿತು. ಗೋಗ್ರದ ಬಳಿ ನಡೆದ ಕದನದಲ್ಲಿ ಬಾಬರನ ಸೈನ್ಯ ನಸರತ್ ಶಾಹನ ಸೈನ್ಯವನ್ನು ಪರಾಜಯಗೊಳಿಸಿತು.

ಇವನು ಸಾಹಿತ್ಯ ಮತ್ತು ಕಲಾಪೋಷಕನಾಗಿದ್ದ. ಇವನ ಆಶ್ರಯದಲ್ಲಿ ಸಂಸ್ಕøತ ಮಹಾಭಾರತ ಬಂಗಾಲಿಗೆ ಅನುವಾದಗೊಂಡಿತು. ರಾಜಧಾನಿಯಾದ ಗೌರ್‍ನಲ್ಲಿ ಇವನು ಕಟ್ಟಿಸಿದ ಬಾರಾ ಸೋನ್ ಮತ್ತು ಕದಮ್ ರಸೂಲ್ ಮಸೀದಿಗಳು ಪ್ರಸಿದ್ಧವಾದವು. 1533ರಲ್ಲಿ ಇವನು ಕೊಲೆಗೆ ಈಡಾದ. ಇವನ ತರುವಾಯ ಅಲ್ಲಾ-ಉದ್-ದೀನ್ ಫಿರೋಜ್ ಶಾಹ ಬಂಗಾಲದ ದೊರೆಯಾದ.
ತುಗಲಕ್ ಸಂತತಿಯ 8ನೆಯ ದೊರೆಯ ಹೆಸರೂ ನಸರತ್ ಶಾಹ. ಇವನು ಸುಲ್ತಾನ್ ಫಿರೂಜûನ ಮೊಮ್ಮಗ. ಕೆಲವು ಸರದಾರರ ಬೆಂಬಲದಿಂದ 1395ರಲ್ಲಿ ಸುಲ್ತಾನನಾಗಿ ಫಿರೋಜಾóಬಾದಿನಲ್ಲಿ ಆಳ್ವಿಕೆ ಆರಂಭಿಸಿದ. ಇವನ ಪ್ರತಿಸ್ಪರ್ಧಿ ಹಾಗೂ ದಾಯಾದಿ ಮಹಮ್ಮದ್ ತುಗಲಕ್ ದೆಹಲಿಯಲ್ಲಿ ಅದೇ ಕಾಲದಲ್ಲಿ ಆಳ್ವಿಕೆ ನಡೆಸುತ್ತಿದ್ದ. ನಸರತ್ ಶಾಹನ ಆಳ್ವಿಕೆ ಮೂರು ನಾಲ್ಕು ವರ್ಷಗಳೊಳಗೆ ಕೊನೆಗೊಂಡಿತು. ಈತ ಕೊಲೆಯಾದ. ಅನಂತರ ಸುಲ್ತಾನ್ ಮಹಮದ್ ತುಗಲಕ್ ಈ ಮನೆತನದ ಏಕೈಕ ಮತ್ತು ಕೊನೆಯ ಪ್ರತಿನಿಧಿಯಾಗಿ ಉಳಿದ.						
			(ಎಂ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ